ಬರ್ಗೇನಿ, ಆಬೆಲ್
	1838-1888. 19ನೆಯ ಶತಮಾನದ ಫ್ರೆಂಚ್ ವಿದ್ವಾಂಸ. ವೈದಿಕ ಭಾಷೆ, ಛಂದಸ್ಸು, ಸಾಹಿತ್ಯ, ದೇವತಾವಾದ, ದೇವತೆಗಳ ಹಿನ್ನಲೆಯ ಪ್ರಾಕೃತಿಕ ಶಕ್ತಿಗಳು, ವ್ಯಾಕರಣ, ನಿರುಕ್ತ ಈ ಎಲ್ಲ ವಿಷಯಗಳ ಮೇಲೂ ತುಂಬಾ ಮಹತ್ತ್ವದ ಸಂಶೋಧನೆ ನಡೆಸಿದ. ಮ್ಯಾಕ್ಸ್‍ಮ್ಯುಲರನ ಗುರುವಾದ ಯೂಜೀನ್ ಬರ್ನೋಫನ ತರುವಾಯ ಈತನೇ ಫ್ರೆಂಚ್ ವಿದ್ವಾಂಸರಲ್ಲಿ ಅಗ್ರಗಣ್ಯನೆನ್ನಬಹುದು. ಮುಂದೆ ಪಾಣಿನಿ ಮತ್ತು ವೇದ ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದ ಲೂಯಿ ರೇನು ಇವನ ಶಿಷ್ಯವರ್ಗದಲ್ಲಿ ಸೇರಿದವ. ಇವನ ಅತ್ಯಂತ ಪ್ರಧಾನ ಗ್ರಂಥ ದ ರಿಲಿಜನ್ ವೇದಿಕ್ (ವೈದಿಕ ಧರ್ಮ). ಫ್ರೆಂಚಿನಲ್ಲಿರುವ ಈ ಕೃತಿ 1878ರಿಂದ 1883ರ ಅವಧಿಯಲ್ಲಿ ಪ್ರಕಟವಾಯಿತು. ಕಳೆದ ದಶಕದಲ್ಲಿ ಪುಣೆಯ ವಿ.ಎಮ್. ಬೆಡೇಕರ್ ಅವರು ಇದರ ಇಂಗ್ಲಿಷ್ ಭಾಷಾಂತರ ಮಾಡಿದ್ದಾರೆ. ಈ ಗ್ರಂಥದಲ್ಲಿ ವೈದಿಕ ದೇವತೆಗಳ ವಿಶಿಷ್ಟ ವಿಚಾರವೆಲ್ಲ ತುಂಬ ಮನನೀಯವಾಗಿ ಬಂದಿದೆ.
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ